ಕಸದ ವಿಲೇವಾರಿ : ಮನೆ, ಶಾಲೆ, ಕಾರ್ಖಾನೆ, ರಸ್ತೆಗಳಲ್ಲಿ ಬೀಳುವ, ಬೇಸಾಯ ಕೈಗಾರಿಕೆಗಳಿಂದ ಹೊರಬೀಳುವ, ಕೆಲಸಕ್ಕೆ ಬಾರದ ವಸ್ತುವೇ ಕಸ. ಧೂಳು, ಬೂದಿ, ಕಡ್ಡಿ, ಸಿಪ್ಪೆ, ಸೊಪ್ಪು ಸದೆ, ಕೊಳೆವ ವಸ್ತು, ಕಾಗದ, ರಟ್ಟು, ಬಟ್ಟೆಚಿಂದಿಗಳು, ಜಿಡ್ಡು ಮತ್ತಿತರ ಹೊತ್ತಿಕೊಂಡು ಉರಿವ ಇಲ್ಲವೇ ಉರಿಯದ ಉಳಿಕೆಗಳೂ ಇದರಲ್ಲಿರುತ್ತವೆ. ಎಲ್ಲೇ ಆಗಲಿ ಕಸ ರಾಸಿ ಬಿದ್ದರೆ ಕೊಳಕು, ಅನಾರೋಗ್ಯಕರ. ಇದರಲ್ಲಿ ಪ್ರಾಣಿ, ಗಿಡ ಮರ ಸಂಬಂಧ ವಸ್ತುಗಳು ಕೊಳೆತು ನೊಣಗಳಿಗೆ ಆಸರೆಯಾಗಬಹುದು. ಕಸದಲ್ಲಿನ ಕಾಳುಕಡ್ಡಿ ತಿನ್ನಲು ಇಲಿ, ಹೆಗ್ಗಣಗಳೂ ಬರುತ್ತವೆ. ಧೂಳು, ಹುಳ, ಹುಪ್ಪಟೆ, ನೊಣಗಳಿಂದ ರೋಗಾಣುಗಳು ಜನರಿಗೆ ಹರಡುವವು. ಕಸಕಡ್ಡಿ ರಾಶಿಯಾಗಿ ಬಿದ್ದರೆ ಕೊಳಕಾಗಿ ಅಸಹ್ಯವಾಗಿ ಕಾಣುತ್ತದೆ. ಆದ್ದರಿಂದ ಕಸ ಎಲ್ಲಿ ಬಿದ್ದರೂ ಕೂಡಿಹಾಕಿ, ಸಾಗಿಸಿ, ಆರೋಗ್ಯಕ್ಕೆ ಕುಂದುಬರದಂತೆ ವಿಲೇವಾರಿ ಆಗಬೇಕು. ಪರಿಸರವನ್ನು ಆರೋಗ್ಯಕರವಾಗಿ ಇರಿಸಲು ಕಸದ ಸಾಗಣೆ ಮುಖ್ಯ. ಜನಾರೋಗ್ಯ ಮಟ್ಟವನ್ನು ಈ ಸೇವೆಯಿಂದ ಅಳೆಯಬಹುದು.

ಒಂದು ಊರಿನ ಜನರ ಜೀವನ ಮಟ್ಟಕ್ಕೆ ತಕ್ಕಹಾಗೆ ಅಲ್ಲಿ ಬೀಳುವ ಕಸವೂ ಅದರ ಪ್ರಮಾಣವೂ ಇರುತ್ತದೆ. ಉನ್ನತವರ್ಗದ ಜನರ ಮನೆಗಳಲ್ಲಿ ಬೀಳುವ ಕಸದ ಪ್ರಮಾಣ ಹೆಚ್ಚಾಗಿರುವುದು. ಬಹುಮಟ್ಟಿಗೆ ಕಾಗದ, ಪೊಟ್ಟಣಗಳು, ರಟ್ಟುಗಳು ಪ್ಲಾಸ್ಟಿಕ್ ಸಾಮಾನುಗಳು, ಖಾಲಿ ಸೀಸೆ, ಡಬ್ಬಗಳು, ಪಿಂಗಾಣಿ, ಗಾಜಿನ ವಸ್ತುಗಳೂ ಹೇರಳವಾಗಿರುತ್ತವೆ. ಮಲ ಮೂತ್ರಗಳನ್ನು ಕಸವೆಂದು ಎಣಿಸುವುದಿಲ್ಲವಾದರೂ ನಮ್ಮ ರಾಜ್ಯಗಳಲ್ಲಿ ರಸ್ತೆಗಳ ಕಸದಲ್ಲಿ ಅವೂ ಸೇರಿರುತ್ತವೆ. ಆಯಾ ಋತುಗಳು, ನಗರದ ವಿಸ್ತರಣಗಳಿಗೆ ತಕ್ಕಹಾಗೆ ಕಸವೂ ಬೇರೆ ಬೇರೆ ತೆರನಾಗಿರುವುದು.

ಜಾಡಮಾಲಿಗಳು ಗುಡಿಸಿ ಒಂದೆಡೆ ಗುಡ್ಡೆಹಾಕಿದ್ದು ರಸ್ತೆ ಕಸ. ತೆರೆದ ಬಚ್ಚಲು, ಚರಂಡಿಗಳ ರೊಚ್ಚನ್ನು ಜಾಡಮಾಲಿಗಳು ಕಸದೊಂದಿಗೇ ಸೇರಿಸುವುದುಂಟು. ಇದರಲ್ಲಿ ಎಲೆಗಳು, ಹುಲ್ಲುಕಡ್ಡಿಗಳು, ಕಾಗದ, ಲದ್ದಿ, ಸಗಣಿ, ಹಿಕ್ಕೆ, ಗಂಜಲಗಳೇ ಮುಂತಾದವೂ ಇರುತ್ತದೆ. ಮಾರುಕಟ್ಟೆಯಿಂದ ಬಂದ ಕಸದಲ್ಲಿ ಕೊಳೆತ ಹಣ್ಣು, ಹಂಪಲು, ತರಕಾರಿ, ಹೊಟ್ಟು, ಸಿಪ್ಪೆ, ಗಿಡಮರ ಇಲ್ಲವೇ ಪ್ರಾಣಿ ಸಂಬಂಧದ ವಸ್ತುಗಳು ಸೇರಿರುತ್ತವೆ. ಲಾಯ, ದೊಡ್ಡಿ, ರೊಪ್ಪಗಳ ಕಸದಲ್ಲಿ ಪ್ರಾಣಿಗಳ ಮಲ ಗಂಜಲ, ಉಳಿದ ಮೇವು ಕಾಳುಕಡ್ಡಿಗಳೂ ಇರುವವು. ಕಾರ್ಖಾನೆಗಳಿಂದ ಬರುವ ಕಸದಲ್ಲಿ ಸೀಮೆಸುಣ್ಣದಂಥ ನಿರಪಾಯಕರದಿಂದ ಹಿಡಿದು ತೀರ ವಿಷಕಾರಿ, ಉರಿದು ಸಿಡಿವ ವಸ್ತುಗಳ ತನಕ ಏನಾದರೂ ಇರಬಹುದು. ಮನೆ ಕಸದಲ್ಲಿ ಬೂದಿ, ಇದ್ದಿಲು, ಕಾಗದ ರಟ್ಟು, ಬಟ್ಟೆ ಚೂರುಗಳು, ಕಡ್ಡಿ, ಪುಕ್ಕ, ಲೋಹಚೂರುಗಳು, ಗಾಜು, ದೂಳು, ಕೊಳಚೆ, ಅಡುಗೆ ಮನೆ ಗಲೀಜಿನ ರೊಚ್ಚೂ ಇರುವುವು. ಅಡುಗೆಮನೆ ಗಲೀಜನ್ನು ಆಗಾಗ್ಗೆ ಬೇಗನೆ ತೆಗೆಯದಿದ್ದರೆ ಕೊಳೆತು ನಾರುತ್ತದೆ.

ಕಸವನ್ನು ಹೊರಸಾಗಿಸುವ ಮುಂಚೆ ಅದನ್ನು ಒಂದೆಡೆ ಗುಡ್ಡೆ ಹಾಕುವುದು ಮುಖ್ಯ. ಸರಿಯಾಗಿ ಮುಚ್ಚುವ ಮುಚ್ಚಳವಿರುವ ತಗಡಿನ ಡಬ್ಬ ಅನುಕೂಲಕರ. ಭಾರತದಲ್ಲಿ ದಿನವೂ ಒಬ್ಬನಿಂದ ಆಗುವ ಕಸದ ಪ್ರಮಾಣ ೦.೦೫-೦.೧೦ ಘನ ಅಡಿಯಷ್ಟೆಂದು ಲೆಕ್ಕವಿದೆ. ೫ ಮಂದಿ ಇರುವ ಮನೆಗೆ ಅರ್ಧ ಘನ ಅಡಿಯ ಡಬ್ಬ ಸಾಕು. ೩ ದಿನಕ್ಕೊಮ್ಮೆ ಕಸ ಎತ್ತುವುದಾದರೆ ೨ ಘನ ಅಡಿಗಳ ಡಬ್ಬ ಬೇಕಾಗುವುದು. ಜಾತ್ರೆ, ಉತ್ಸವ, ಹಬ್ಬ, ವಾರಗಳು, ಮದುವೆ ಮುಂತಾದ ಕಾಲಗಳಲ್ಲಿ ಇದು ಹೆಚ್ಚುತ್ತದೆ. ಮುಂದುವರಿದ ನಾಡುಗಳಲ್ಲೀಗ ಹಾಗೇ ಸಾಗಿಸಬಹುದಾದ ಕಾಗದದ ಚೀಲಗಳು ಬಳಕೆಯಲ್ಲಿವೆ. ಬೀದಿಯಲ್ಲಿ ಅಲ್ಲಲ್ಲಿ ಕಸದ ಗುಂಡಿಗಳನ್ನು ತೋಡಿದರೆ ಕೊಳಕಿನ ಗಲೀಜು ಗಾಳಿಗೆ ಹಾರಿ, ಮಳೆ ಬಂದಾಗ ಕೊಚ್ಚಿ ಹರಡುವುದು. ಸಾರ್ವಜನಿಕ ಕಸದ ತೊಟ್ಟಿಗಳಿಗೆ ಭಾರತದಲ್ಲಿ ಮುಚ್ಚಳಗಳಿರವು. ಮಳೆ ನೀರು ಒಳನುಗ್ಗದಂತಿರಿಸಲು ಕಲ್ಲುಹಾಸಿನ ಮೇಲೆ ತಳವಿಲ್ಲದ, ಹಿಡಿಗಳಿರುವ, ಗುಂಡಗಿರುವ ತೊಟ್ಟಿಗಳು ಬಳಕೆಯಲ್ಲಿವೆ. ಹಾಗೆ, ನಾಯಿಗಳು ಇವನ್ನು ಕೆದಕಿ ಬೆದಕಿ ಕಸವನ್ನು ಹೊರಚಲ್ಲುತ್ತವೆ. ಮುಚ್ಚಳ ಹಾಕಿದ್ದರೆ ಅವನ್ನು ಮುಟ್ಟಿ ತೆಗೆಯಲು, ಹೇಸಿ ಜನರು ಹೊರಗೆ ಸುತ್ತಲೂ ಎಲ್ಲೆಂದರಲ್ಲಿ ಎಸೆದು ಇನ್ನಷ್ಟು ಗಲೀಜು ಮಾಡುತ್ತಾರೆ. ಆಗಿಂದಾಗ್ಗೆ ಪುರಸಭೆಯ ಲಾರಿಗಳೋ ಗಾಡಿಗಳೋ ಇದರಲ್ಲಿನ ಕಸವನ್ನು ಎತ್ತಿ ತುಂಬಿಕೊಂಡು ದೂರ ಸಾಗಿಸುತ್ತವೆ.

ಕಸವನ್ನು ಎತ್ತುವ ಏರ್ಪಾಡು ಹಣಕಾಸಿಗೆ ತಕ್ಕ ಹಾಗಿರುತ್ತದೆ. ಒಂದೊಂದು ಮನೆಯಿಂದಲೂ ಕಸ ಎತ್ತುವುದೇ ಎಲ್ಲಕ್ಕೂ ಒಳ್ಳೆಯ ವಿಧಾನ. ಆದರೆ, ನಮ್ಮಲ್ಲಿ ಹತ್ತಿರದಲ್ಲಿ ಹೊರಗಡೆ ಇಟ್ಟಿರುವ ತೊಟ್ಟಿಯಲ್ಲಿ ಮನೆಗಳವರು ಕಸ ತಂದು ಹಾಕಬೇಕು. ಬಹಳ ಮಂದಿ ಹೀಗೆ ಹಾಕದ್ದರಿಂದ, ಎಲ್ಲೆಂದರಲ್ಲಿ ಕಸದ ಗಲೀಜು ಮನೆಯಿಂದ ಹೊರಗೆ ಬಿದ್ದಿರುತ್ತದೆ. ಆಗ ತೊಟ್ಟಿಗಳಿಂದ ಕಸ ಎತ್ತುವ ಸಿಬ್ಬಂದಿಯ ಜೊತೆಗೆ ಬರೀ ಬೀದಿ ಕಸಗುಡಿಸುವವರ ಸೈನ್ಯವೇ ಬೇಕಾಗುವುದು. ಕಸವನ್ನೆಲ್ಲ ಗುಡಿಸಿ ಒಂದೆಡೆ ರಾಸಿ ಹಾಕಲು ತಲೆ ಮೇಲೆ ಹೊರುವ ಪುಟ್ಟಿ, ಮಂಕರಿಗಳಿಗಿಂತಲೂ ಮುಚ್ಚಿದ ಡಬ್ಬವಿರುವ ಒಂಟಿಚಕ್ರದ ಕೈಗಾಡಿ ಉತ್ತಮ, ಹೀಗೆ ರಾಸಿಹಾಕಿದ ಕಸ ಎತ್ತಿನಗಾಡಿ, ಲಾರಿಗಳಲ್ಲಿ ದೂರ ಸಾಗುತ್ತದೆ. ಸತ್ತ ಪ್ರಾಣಿಗಳನ್ನು ನೇರವಾಗಿ ವಿಲೇವಾರಿಯಾಗುವ ಜಾಗಕ್ಕೆ ಸಾಗಿಸುವರು.

ಜನಾರೋಗ್ಯ ಸುಧಾರಿಸಬೇಕಾದರೆ ನಮ್ಮಲ್ಲಿನ ಇಂದಿನ ಕಸ ಎತ್ತಿ ಸಾಗಿಸುವ ವಿಧಾನಗಳು ಇನ್ನೂ ಹೆಚ್ಚಿನ ಮಟ್ಟದವಾಗಬೇಕು. ಪುರಸಭೆ, ನಗರ ಸಮಿತಿಗಳವರು ಸಾರ್ವಜನಿಕ ತೊಟ್ಟಿಗಳಿಂದಲೇ ಅಲ್ಲದೆ ಮನೆಮನೆಯಿಂದಲೂ ಕಸವನ್ನು ಡಬ್ಬಗಳಲ್ಲಿ ಎತ್ತಿಸಾಗಿಸಬೇಕೆಂದು ಪರಿಸರದ ಆರೋಗ್ಯ ಸಮಿತಿ (೧೯೪೯) ಸೂಚಿಸಿದೆ. ಮನೆಗಳಿಂದ ದಿನ ಬಿಟ್ಟು ದಿನವಾದರೂ ಕಸ ಎತ್ತಿಸಾಗಿಸುವುದಾದರೆ ಹೊರಗಡೆ ಅಷ್ಟೊಂದು ತೊಟ್ಟಿಗಳನ್ನು ಇಡಬೇಕಾಗಿಲ್ಲ. ಕಸದ ಗಾಡಿಗಳು ಧೂಳು ಹಾರುವಂತೆ ತೆರೆದಿರದೆ ಮುಚ್ಚಿರಬೇಕು. ಕೈಗಾಡಿ, ಎತ್ತಿನಗಾಡಿಗಳಿಗಿಂತ ಲಾರಿಗಳೇ ಒಳ್ಳೆಯವು. ಖರ್ಚು ಕಡಿಮೆ, ಹಿಂಭಾಗವನ್ನು ಮೊಗುಚಿಹಾಕುವ ಲಾರಿಗಳು ಮಹಾನಗರಗಳಲ್ಲಿ ಬಳಕೆಯಲ್ಲಿವೆ. ಇವುಗಳ ಗಲೀಜು, ವಾಸನೆ ಜನರ ಗಮನಕ್ಕೆ ಅಷ್ಟಾಗಿ ಬಾರದ ಹಾಗೆ ಬೆಳಗಿನ ಜಾವದಲ್ಲೇ ಸಾಗಹಾಕಬೇಕು. ಕಸ ಬಿದ್ದ ಮೇಲೆ ಎಷ್ಟು ಬೇಗನೆ ಎಷ್ಟು ಚೆನ್ನಾಗಿ ಎತ್ತಿಹಾಕಿ ಸಾಗಿಸಿದರೆ ಅಷ್ಟೂ ಒಳ್ಳೆಯದು. ಆರೋಗ್ಯಾಧಿಕಾರಿಗಳು ಈ ಜವಾಬ್ದಾರಿ ಹೊತ್ತಿರುವರು.

ವಿಲೇವಾರಿ ವಿಧಾನಗಳು: ಎಲ್ಲ ಕಡೆಗಳಲ್ಲೂ ಅನುಕೂಲವಾಗುವಂಥ ಒಂದೇ ಒಂದು ವಿಧಾನ ಇದೆಂದು ಯಾವುದನ್ನೂ ತೋರಿಸುವಂತಿಲ್ಲ. ಅದಕ್ಕೆ ತಗಲುವ ವೆಚ್ಚ, ಇರುವ ಜಾಗ, ಕೂಲಿ ಸಿಬ್ಬಂದಿ ಮುಂತಾದವಕ್ಕೆ ತಕ್ಕ ವಿಧಾನವನ್ನು ಆರಿಸಿಕೊಳ್ಳಬೇಕು. ನಮ್ಮಲ್ಲಿ ಕಸವನ್ನು ವಿಂಗಡಿಸುವುದು ಅಪೂರ್ಣ. ವಿಲೇವಾರಿಗಾಗಿ ೬ ವಿಧಾನಗಳಿವೆ.

೧ ಗುಡ್ಡೆಹಾಕುವುದು: ಊರಿನಲ್ಲಿ ಹಳ್ಳ ಕೊಳ್ಳ, ಕಂದಕಗಳನ್ನು ತುಂಬಲೂ ಒಣಕಸವನ್ನು ಸುಲಭವಾಗಿ ವಿಲೇವಾರಿ ಮಾಡಲೂ ಈ ವಿಧಾನ ಅನುಕೂಲಕರ. ಕಸದಲ್ಲಿರುವ ಜೀವಾಣುಗಳ ಕೆಲಸದಿಂದ ಕಸದ ಗಾತ್ರವೂ ಕುಗ್ಗಿ ಬರುಬರುತ್ತ ಒಣ ಗೊಬ್ಬರವಾಗುತ್ತದೆ. ಕೋಲ್ಕತದಲ್ಲಿ, ನಗರದ ಕಸವನ್ನೆಲ್ಲ ಗುಡ್ಡೆ ಹಾಕಿ ಆಮೇಲೆ ಅದನ್ನು ಬೇಸಾಯಕ್ಕೆ ಬಿಟ್ಟುಕೊಡುವರು. ನೊಣ ಇಲಿಗಳು ಸೇರಿಕೊಂಡು ಕೆಟ್ಟವಾಸನೆ ಹರಡಿ, ಗಾಳಿಗೆ ಕಸ ಹಾರುವುದು ಇದರ ಮುಖ್ಯ ಕೆಡುಕು. ವಾಸದ ಮನೆಗಳಿಂದ ಆದಷ್ಟೂ ದೂರದಲ್ಲಿ ಕಸವನ್ನು ಗುಡ್ಡೆಹಾಕಬೇಕು. ಜನಾರೋಗ್ಯ ಕೆಡಿಸಿ, ಗಲೀಜಾಗಿ, ಪರಿಸರವನ್ನೆಲ್ಲ ಬಹಳ ಹೊಲಗೆಡಿಸುವುದರಿಂದ ಎಂದಿಗೂ ಕಸವನ್ನು ಗುಡ್ಡೆ ಹಾಕಲೇಕೂಡದೆಂದು ವಿಶ್ವ ಆರೋಗ್ಯಸಂಸ್ಥೆಯ ಪರಿಣಿತರ ಸಮಿತಿಯೊಂದು (೧೯೬೭) ಎಚ್ಚರಿಸಿದೆ.

೨ ಹಳ್ಳತುಂಬಿಕೆ: ಊರಿನಲ್ಲಿ ಸಾಕಷ್ಟು ಹಳ್ಳ, ಕೊಳ್ಳಗಳಿದ್ದರೆ, ಕ್ರಮವಾಗಿ ಅವನ್ನು ಕಸದಿಂದ ತುಂಬಿ ಮುಚ್ಚಿಹಾಕುವ ಉಪಾಯವಿದು. ಕಸವನ್ನು ಪದರ ಪದರವಾಗಿ ೮ ಅಡಿಗಳ ಆಳಕ್ಕೆ ಹಾಕಿದಮೇಲೂ ಒಂದು ಅಡಿ ಮಂದಕ್ಕಾದರೂ ಮಣ್ಣನ್ನು ಹರವಬೇಕು. ಆಗ ನೊಣ, ಇಲಿಗಳ ಕಾಟ ತಪ್ಪಿ, ಕೆಟ್ಟವಾಸನೆ ಏಳದೆ ದೂಳಿಲ್ಲದಂತಿರುವುದು. ಕಸ ಜೈವಿಕವಾಗಿ ಚೆನ್ನಾಗಿ ಕೊಳೆತು, ವಾರದೊಳಗಾಗಿ ಒಳಗಿನ ಕಾವು ೬೦' ಸೆಂ. ಮಟ್ಟಕ್ಕೆ ಏರುವುದರಿಂದ ರೋಗಾಣುಗಳು ಸತ್ತು ಬೇಗನೆ ಗೊಬ್ಬರವಾಗುತ್ತದೆ. ಆಮೇಲೆ ೨-೩ ವಾರಗಳಲ್ಲಿ ಕಾವಿಳಿಯುತ್ತದೆ. ಸಾಮಾನ್ಯವಾಗಿ, ಪುರಾ ಕೊಳೆತು ಒಣಗಿ ನಿರಪಾಯಕರ ಆಗಬೇಕಾದರೆ ಸುಮಾರು ೪-೬ ತಿಂಗಳು ಹಿಡಿಯುತ್ತವೆ. ೧೦,೦೦೦ ಜನರಿರುವ ಪಟ್ಟಣಕ್ಕೆ ಈ ವಿಧಾನಕ್ಕೆ ೧-೧.೫ ಎಕರೆಗಳಷ್ಟು ಜಾಗ ಬೇಕಾಗುತ್ತದೆ. ಇತ್ತೀಚೆಗೆ ಈ ಕೆಲಸಕ್ಕಾಗಿ ಬುಲ್ಡೋಜರುಗಳನ್ನು ಬಳಸುತ್ತಿದ್ದಾರೆ.

೩ ಸುಟ್ಟುಬೂದಿಗೊಳಿಸುವಿಕೆ: ಕಸಕ್ಕೆ ಉರಿಯಿಕ್ಕಿ ಬೂದಿಗೊಳಿಸುವುದು (ಇನ್ ಸಿನರೇಷನ್) ಎಲ್ಲಕ್ಕಿಂತಲೂ ಬಲು ಒಳ್ಳೆಯ ಆರೋಗ್ಯಕರ ವಿಧಾನ. ಕಸ ಹಾಕಲು ಎಲ್ಲೂ ಜಾಗವಿಲ್ಲದಾಗ ಹೀಗೆ ಮಾಡಬಹುದು. ಆಸ್ಪತ್ರೆಯಲ್ಲಿ ರಾಶಿಬೀಳುವ ಕಸವಂತೂ ತೀರ ಹಾನಿಕರವಾದ್ದರಿಂದ ಇದು ಬಲು ಚೆನ್ನಾದ ಕ್ರಮ. ಎಷ್ಟೋ ಸೇನಾಶಿಬಿರಗಳಲ್ಲೂ ದೊಡ್ಡ ನಗರಗಳಲ್ಲೂ ಇದು ಜಾರಿಯಲ್ಲಿದೆ. ಸಾಕಷ್ಟು ನುಣ್ಣನೆಯ ಕಸ, ಧೂಳು ಇರುವುದರಿಂದ ಬೂದಿಗೊಳಿಸುವ ವಿಧಾನ ನಮ್ಮಲ್ಲಿ ಜನಪ್ರಿಯವಾಗಿಲ್ಲ. ಧೂಳನ್ನು ಮೊದಲು ಜರಡಿ ಹಿಡಿದರೆ ಮಾತ್ರ ಆಗಬಹುದು. ಹಾಗೆ ಮಾಡಲು ಖರ್ಚು ಸಿಬ್ಬಂದಿ ಹೆಚ್ಚುವುದಲ್ಲದೆ ಉರಿವ ಒಲೆಯಲ್ಲೂ ತಿರುವುತ್ತಿರಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಬೇಸಾಯಕ್ಕೆ ಗೊಬ್ಬರ ಇಲ್ಲವಾಗುತ್ತದೆ. ಆದ್ದರಿಂದ ಬರೀ ಖರ್ಚಿನ ಈ ವಿಧಾನ ನಮ್ಮಲ್ಲಿ ಅಷ್ಟಾಗಿ ಚಾಲ್ತಿಯಲ್ಲಿಲ್ಲ. ಸುಟ್ಟುಬೂದಿಗೊಳಿಸಿದಾಗ ಕಸದ ತೂಕ ಮೊದಲಿನ ಕಾಲು ಭಾಗಕ್ಕೆ ಇಳಿಯುತ್ತದೆ. ಕೊನೆಗುಳಿದ ಕಿಟ್ಟವನ್ನು ರಸ್ತೆ ಕಾಮಗಾರಿಗೆ ಬಳಸಬಹುದು. ಪುಡಿಮಾಡಿ ಸುಣ್ಣದೊಂದಿಗೆ ಸೇರಿಸಿ ಕಲ್ಲುಗಾರೆ ಮಾಡಬಹುದು.

ಸುಟ್ಟುಬೂದಿಗೊಳಿಸುವ ದೊಡ್ಡ ಒಲೆಗಳಲ್ಲಿ ಹಲವು ಬಗೆಗಳಿವೆ. ಅವುಗಳಲ್ಲಿ ಉರಿ ಇಟ್ಟಿಗೆಗಳಿಂದ ಕಟ್ಟಿರುವ ಒಲೆ, ಪಕ್ಕದಿಂದ ಕಸವನ್ನು ಒಳಕ್ಕೆ ಸುರಿವ ಕಂಡಿಗಳು, ಹೊಗೆ ಹೋಗಲು ನೇರವಾದ ಎತ್ತರದ ಕೊಳವೆ, ಬೂದಿ ಕೆಳಕ್ಕೆ ಬೀಳುವಂತೆ ಜಾಲರಿ, ಕೆಳಗೆ ಬಿದ್ದ ಬೂದಿಯನ್ನು ಹೊರಗೆಳೆವ ಕಂಡಿ ಇರುತ್ತವೆ. ಮುಖ್ಯವಾಗಿ, ಸರಾಗವಾಗಿ ಒಳಕ್ಕೆ ಗಾಳಿತೂರಿ ಹೊಗೆಯೇಳದಂತೆ ಎಲ್ಲವೂ ಉರಿದುಹೋಗುವಂತಿರಬೇಕು. ಒಳಗಿನ ಉರಿಯ ಕಾವು ೬೭೫' ಸೆಂ. ಗಿಂತಲೂ ಹೆಚ್ಚಿದ್ದರೆ ಮಾತ್ರ ಹಾಗಾಗುತ್ತದೆ.

೪ ಕಾಂಪೋಸ್ಟ್‌ ಗೊಬ್ಬರ: ಬರಿಯ ಕಸವನ್ನೋ, ಮಲಮೂತ್ರ ಇಲ್ಲವೇ ರೊಚ್ಚನ್ನು ಕೂಡಿಸಿಯೋ ವಿಲೇವಾರಿ ಮಾಡುವ ಜೈವಿಕ ವಿಧಾನವಿದು. ಏಕಾಣು ಜೀವಿಗಳ ಚಟುವಟಿಕೆಯಿಂದ ಜೈವಿಕ ವಸ್ತುಗಳು ಒಡೆಯುವುದರಿಂದ ನೆಲಕ್ಕೆ ಸಾರ ವತ್ತಾದ, ಹಾನಿಕರವಲ್ಲದ, ವಾಸನೆಯಿಲ್ಲದ ಗೊಬ್ಬರ ಒದಗುತ್ತದೆ. ಕಾಂಪೋಸ್ಟ್‌ ಗೊಬ್ಬರ ತಯಾರಿಸಲು ೩ ವಿಧಾನಗಳಿವೆ.
ನೊಣದ ಹಾವಳಿ, ತಿರುವಿಹಾಕಿದಾಗ ಕಾವಿನ ಇಳಿತ, ಸಿಬ್ಬಂದಿಯ ದುಬಾರಿ ವೆಚ್ಚ ಹೆಚ್ಚುವುದರಿಂದ ಹಳೆಯ ಇಂದೋರಿನ ವಿಧಾನ ಈಗ ಎಲ್ಲೂ ಜಾರಿಯಲ್ಲಿಲ್ಲ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಭಾರತೀಯ ಬೇಸಾಯದ ಸಂಶೋಧನ ಸಂಸ್ಥೆಯ ವತಿಯಿಂದ ನಡೆಸಿದ ಶೋಧನೆಗಳಿಂದ ಗಾಳಿಗೊಡ್ಡಿಯೋ ಗಾಳಿಗೊಡ್ಡದೆಯೋ ಕಾಂಪೋಸ್ಟ್‌ ಗೊಬ್ಬರ ತಯಾರಿಸುವ ಬೆಂಗಳೂರು ವಿಧಾನ ಪಟ್ಟಣಗಳ ಕಸ, ಮಲಮೂತ್ರಗಳ ವಿಲೇವಾರಿಗೆ ಒಳ್ಳೆಯದು. ಇದು ಚೆನ್ನಾಗಿ ಆಗಬೇಕಾದರೆ, ಕಸದಲ್ಲಿ ಸಾಕಷ್ಟು ಸಾರಜನಕ, ರಂಜಕಲವಣಗಳು ಇರಲೇಬೇಕು. ಚೆನ್ನಾಗಿ ಕಾಂಪೋಸ್ಟ್‌ ಗೊಬ್ಬರ ಆಗುವಂತೆ ಸಗಣಿ ಗಂಜಳಗಳನ್ನು ಹಾಕಬೇಕು. ಇದಕ್ಕೆ ಬಿಸಿ ಹುದುಗೇಳಿಸುವ ಕ್ರಿಯಾಗತಿ ಎಂದು ಹೆಸರಿದೆ. ಕಸದ ಪ್ರಮಾಣಕ್ಕೆ ತಕ್ಕಂತೆ. ೩' ಆಳ, ೫'-೮' ಅಗಲ, ೧೫'-೩೦' ಉದ್ದದ ಗುಂಡಿಗಳನ್ನು ತೊಡಬೇಕು. ಕೊಳೆಯುವುದು ತಡವಾಗುವುದರಿಂದ, ೩’ಗೂ ಆಳ ಮೀರಿ ಅಗೆಯಬಾರದು. ಗುಂಡಿಗಳು ಊರಿಗೆ ಅರೆ ಮೇಲಿ ಆಚೆಯಾದರೂ ಇರಬೇಕು. ಅಗಳಿನ ತಳದಲ್ಲಿ ಅರ್ಧ ಅಡಿ ದಪ್ಪಕ್ಕೆ ಕಸವನ್ನು ಮೊದಲು ಹರಡಬೇಕು. ಇದರ ಮೇಲೆ, ಸುಮಾರು ೨" ದಪ್ಪಕ್ಕೆ ಮಲವನ್ನೂ ಹಾಕಬೇಕು. ಆಮೇಲೆ, ಹೀಗೇ ಕಸ, ಮಲಗಳ ಅಷ್ಟೇ ಮಂದದ ಪದರಗಳನ್ನು, ನೆಲದ ಮಟ್ಟದ ಮೇಲುಗಡೆ ಅಡಿ ಎತ್ತರಕ್ಕೆ ಬರುವ ತನಕ ಹಾಕುತ್ತ ಹೋಗಬೇಕು. ಕೊನೆಯ ೯" ದಪ್ಪದ ಪದರ ಕಸದ್ದಾಗಿರಬೇಕು. ಅಗೆದು ರಾಸಿ ಬಿದ್ದಿರುವ ಮಣ್ಣನ್ನು ಇದರಮೇಲೆ ಹಾಕಿ ಮುಚ್ಚಬೇಕು. ಇಷ್ಟೆಲ್ಲ ಸರಿಯಾಗಿ ಮಾಡಿದರೆ, ಇದರಮೇಲೆ ಯಾರಾದರೂ ಓಡಾಡಿದರೆ ಕಾಲುಗಳು ಹೂತುಹೋಗವು. ವಾರದೊಳಗಾಗಿ ಏಕಾಣುಜೀವಿಗಳ ಚಟುವಟಿಕೆಯಿಂದ ಈ ಕಾಂಪೋಸ್ಟ್‌ ಗೊಬ್ಬರದ ಒಳಗಿನ ಕಾವು ೬೦' ಸೆಂ.ಗೆ ಏರಿ ೨-೩ ವಾರಗಳೂ ಹಾಗೇ ಇರುವುದರಿಂದ ಕಸವೂ ಮಲವೂ ಕೊಳೆತು ಎಲ್ಲ ರೋಗಾಣುಗಳೂ ಪರಪಿಂಡಿ ಜೀವಿಗಳೂ ಸಾಯುತ್ತವೆ. ನಾಲ್ಕಾರು ತಿಂಗಳಲ್ಲಿ ಪುರಾ ಕೊಳೆತು ನೇರವಾಗಿ ಜಮೀನಿಗೆ ಹಾಕಲು ಬರುವ ವಾಸನೆಯಿಲ್ಲದ ಹಾನಿಕರವಲ್ಲದ ಒಳ್ಳೆಯ ಗೊಬ್ಬರದ ಪುಡಿಯಾಗಿರುವುದು. ಲಕ್ಷ ಜನರಿಗೂ ಹೆಚ್ಚಾಗಿರುವ ನಗರಗಳಿಗೆ ಈ ವಿಧಾನ ತರವಲ್ಲ. ದೊಡ್ಡ ಪುರಸಭೆಗಳು ಮಾತ್ರ ಮಲ ಮೂತ್ರಾದಿಗಳನ್ನು ಹೊರಸಾಗಿಸಲು ಒಳಚರಂಡಿ ಏರ್ಪಾಡು ಮಾಡುವುದೇ ಸರಿ.

ಯಂತ್ರದ ನೆರವಿನಿಂದ ಕಾಂಪೋಸ್ಟ್‌ ಗೊಬ್ಬರವನ್ನು ಬೇಗನೆ ತಯಾರಿಸುವ ವಿಧಾನ ಹೆಚ್ಚಾಗಿ ಜಾರಿಗೆ ಬರುತ್ತಿದೆ. ದೊಡ್ಡ ಪ್ರಮಾಣಗಳಲ್ಲಿ ಕಚ್ಚಾವಸ್ತುಗಳನ್ನು ಪುಡಿ ಮಾಡಿ ವಿಂಗಡಿಸಿ ಉತ್ಪನ್ನವನ್ನು ತಯಾರಿಸಿ ಪಡೆವ ವಿಧಾನವಿದು. ಅರೆದು ಪುಡಿ ಮಾಡುವಾಗ ಅಡ್ಡಿ ಬರುವ ಚಿಂದಿಬಟ್ಟೆ, ಮೂಳೆ, ಲೋಹ, ಗಾಜು ಮುಂತಾದವನ್ನು ಮೊದಲು ಕಸದಿಂದ ಬೇರ್ಪಡಿಸಬೇಕು. ಉಳಿದುದನ್ನು ೨" ಮೀರದ ದಪ್ಪದ ಚೂರುಗಳಾಗಿ ಯಂತ್ರ ಪುಡಿಮಾಡುತ್ತದೆ. ಕಚರ, ರೊಚ್ಚು, ರಾಡಿ ಇಲ್ಲವೇ ಮಲಮೂತ್ರಗಳೊಂದಿಗೆ ತಿರುಗುವ ಯಂತ್ರದಲ್ಲಿ ಪುಡಿಮಾಡಿದ್ದನ್ನು ಬೆರೆಸಿ ಕಾವಿನಲ್ಲಿಡಬೇಕು. ಇಲ್ಲಿ ಇಂಗಾಲದ ಪ್ರಮಾಣ, ಕಾವು, ತೇವ, ಕ್ಷಾರಾಮ್ಲಾಂಕ (ಠಿಊ), ಗಾಳಿಗೊಡ್ಡಿಕೆ ಇವನ್ನು ಚೆನ್ನಾಗಿ ಗಮನವಿಟ್ಟು ಹತೋಟಿಯಲ್ಲಿರಿಸಬೇಕು. ನಾಲ್ಕಾರು ವಾರಗಳಲ್ಲೇ ಕಾಂಪೋಸ್ಟ್‌ ಗೊಬ್ಬರ ತಯಾರಾಗಿರುತ್ತದೆ. ಹಾಲೆಂಡು, ಜರ್ಮನಿ, ಇಸ್ರೇಲ್ ಮುಂತಾದ ಮುಂದುವರಿದ ಕೆಲವು ದೇಶಗಳಲ್ಲಿ ಈ ವಿಧಾನ ಜಾರಿಯಲ್ಲಿದೆ. ಭಾರತದಲ್ಲೂ ೫ ಲಕ್ಷಕ್ಕಿಂತ ಹೆಚ್ಚು ಜನರಿರುವ ಕೆಲವು ನಗರಗಳಲ್ಲಿ ಇದನ್ನು ಜಾರಿಗೆ ತರುವ ಯೋಜನೆಯಿದೆ.

೫ ಗೊಬ್ಬರದ ಗುಂಡಿಗಳು: ಭಾರತದ ಹಳ್ಳಿಗಳಲ್ಲಿ ಕಸವನ್ನು ಎತ್ತಿ ಸಾಗಿಸಿ ವಿಲೇವಾರಿ ಮಾಡುವ ಬೇರೆ ಏರ್ಪಾಡುಗಳಿಲ್ಲ. ಮನೆಗಳ ಸುತ್ತಮುತ್ತಲೂ ಎಲ್ಲೆಂದರಲ್ಲಿ ಕಸವನ್ನು ಚೆಲ್ಲುವುದರಿಂದ ಜಮೀನೂ ಬಹಳ ಕೆಡುತ್ತದೆ. ಒಂದೊಂದು ಮನೆಯವರೂ ಗೊಬ್ಬರದ ಗುಂಡಿಯಗಳನ್ನು ತೋಡಿ ಕಸಹಾಕುವುದರಿಂದ ಹಳ್ಳಿಗಳ ಈ ಕೆಡುಕಿನ ಗಲೀಜನ್ನು ತಪ್ಪಿಸಬಹುದು. ಕಲಗಚ್ಚು, ಅಡುಗೆಮನೆರೊಚ್ಚು, ಗಲೀಜು, ಸಗಣಿ, ಹುಲ್ಲು, ಸೊಪ್ಪುಸದೆ, ಕಡ್ಡಿಗಳನ್ನು ಗುಂಡಿಗಳೊಳಕ್ಕೆ ಹಾಕಿದ ಮೇಲೆ ದಿನವೂ ಮಣ್ಣಿನಿಂದ ಮುಚ್ಚಬೇಕು. ಒಂದನ್ನು ಹಾಗೆ ಮುಚ್ಚಿಹಾಕಿರುವಾಗ ಇನ್ನೊಂದನ್ನು ಬಳಸುವಂತೆ, ಎರಡು ಗುಂಡಿಗಳಿದ್ದರೆ ಅನುಕೂಲ. ಐದಾರು ತಿಂಗಳಲ್ಲಿ ಒಳ್ಳೆಯ ಗೊಬ್ಬರ ತಯಾರಾಗಿರುತ್ತದೆ. ಹಳ್ಳಿಗಳಲ್ಲಿ ಈ ವಿಧಾನ ಪರಿಣಾಮಕಾರಿ, ಅಲ್ಲದೆ ಸರಳ ಎನ್ನಬಹುದು. ಸಗಣಿಯನ್ನು ಒಂದು ಮುಚ್ಚು ಗುಂಡಿಯಲ್ಲಿ ಮುಚ್ಚಿಟ್ಟು ಕೊಳೆಯಿಸುವುದರಿಂದ ಏಳುವ ಅನಿಲದಿಂದ (ಗೋಬರ್ ಗ್ಯಾಸ್) ಮನೆಯ ದೀಪ, ಒಲೆಗಳನ್ನು ಉರಿಸಬರುವುದೇ ಅಲ್ಲದೆ ಕೊನೆಗೆ ಹಸನಾದ ಗೊಬ್ಬರವೂ ದೊರೆಯುತ್ತದೆ.

೬ ನೀರಿನಲ್ಲಿ ಸುರಿತ: ಕೆರೆ, ಕುಂಟೆ, ಕೊಳಗಳಲ್ಲಾಗಲೀ ಸಣ್ಣ ಹೊಳೆ, ನದಿಗಳಲ್ಲಾಗಲೀ ಊರಿನ ಕಸವನ್ನು ಸುರಿಯಲೇಬಾರದು. ಅದು ಕೊಳೆತು ನಾರುತ್ತ ಗಲೀಜಿಗೆ ಕಾರಣವಾಗುವುದು. ಬೇಗನೆ ದೂರ ಸಾಗುವಂತಿದ್ದು ಅದರಿಂದ ಕೆಟ್ಟ ವಾಸನೆ ನಗರದೊಳಕ್ಕೆ ಬಾರದಿದ್ದಲ್ಲಿ ಮಾತ್ರ ಸಮುದ್ರ, ದೊಡ್ಡ ನದಿಗಳ ದಡದಲ್ಲಿರುವ ನಗರಗಳ ಕಸವನ್ನು ಹರಿದ ನೀರಿಗೆ ಸುರಿದು ಚೆಲ್ಲಬಹುದು.

ಕಸದ ಸಾಗಣೆ ಚೆನ್ನಾಗಿರಬೇಕಾದರೆ ಜನರ ತಿಳಿವಳಿಕೆಯೂ ಚೆನ್ನಾಗಿರಬೇಕು. ತಮ್ಮ ಮನೆಗಳ ಹೊರತಾಗಿ ಆಚಿನ ಪರಿಸರದ ಚೊಕ್ಕತನಕ್ಕೆ ಗಮನ ಹರಿಸುವುದರಲ್ಲಿ ಯಾರಿಗೂ ಆಸಕ್ತಿ ಇರದು. ಅಲ್ಲದೆ, ನಗರ ಸಭೆಗಳೂ ಕಡಿಮೆ ಖರ್ಚಿನಲ್ಲಿ ಕಸ ಸಾಗಣೆ ಉಪಾಯಗಳನ್ನೇ ಹಿಡಿದಿರುವುದರಿಂದ, ಆರೋಗ್ಯ ಕಾಪಾಡಿಕೊಳ್ಳುವ ವಿಚಾರದಲ್ಲಿ ಜನರ ತಿಳಿವಳಿಕೆಗಾಗಿ ಎಡೆಬಿಡದ ಪ್ರಚಾರ ನಡೆಯುತ್ತಿರಬೇಕು.	(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ